About us

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಆರ್ಯ ಈಡಿಗ ಮಹಾಸಂಸ್ಥಾನವು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅಲ್ಲಿನ ಬ್ರಹ್ಮಶ್ರೀ ನಾರಾಯಣಗುರು ಭವನಧಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿಯು ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ವೃತ್ತಿ ನೈಪುಣ್ಯ ಹೆಚ್ಚಿಸುವ ಅನೇಕ ತರಬೇತಿಗಳನ್ನು ನೀಡುತ್ತಿದೆ. ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಇತ್ಯಾದಿ ಅಖಿಲ ಭಾರತ ನಾಗರಿಕ ಸೇವೆಯ ಅಧಿಕಾರಿಗಳನ್ನು ಕೇಂದ್ರ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಪ್ರತಿವರ್ಷ ಆಯ್ಕೆ ಮಾಡಿಕೊಳ್ಳುತ್ತಿದೆ. ಯಾವುದೇ ಪದವಿ ಪಡೆದವರು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಎರಡು ಮೂರು ವರ್ಷಗಳ ಸತತ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದವರಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ಆಯ್ಕೆಯಲ್ಲಿ ನಿರ್ಣಾಯಕವಾಗಿರುವುದರಿಂದ ಅರ್ಹತಾ ಪದವಿಯಲ್ಲಿ ಕಡಿಮೆ ಅಂಕಗಳನ್ನು ಪಡೆದವರೂ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಆಯ್ಕೆಯಾದ ನಿದರ್ಶನಗಳಿವೆ. ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ್ದಾಗಿರುವ ಈ ಹುದ್ದೆಗಳನ್ನು ಹಿಂದುಳಿದ ವರ್ಗಗಳ ಯುವಕ, ಯುವತಿಯರು ಪಡೆದುಕೊಳ್ಳಬೇಕು ಎಂಬುದು ನಮ್ಮ ಅಕಾಡೆಮಿಯ ಉದ್ದೇಶವಾಗಿದೆ.

ಅಕಾಡೆಮಿಯು ಈ ಹುದ್ದೆಗಳಿಗೆ ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆಗೆ (ಪ್ರಿಲಿಮ್ಸ್) ಮತ್ತು ಅದರಲ್ಲಿ ಯಶಸ್ಸು ಪಡೆದವರಿಗೆ ಮುಖ್ಯ ಪರೀಕ್ಷೆ ಎದುರಿಸಲು ತರಬೇತಿ ನೀಡುತ್ತದೆ. ಸತತ ಪರಿಶ್ರಮ ಅವಶ್ಯಕವಾಗಿರುವ ಈ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ವಿಶೇಷ ಕೋಚಿಂಗ್ ಒದಗಿಸಲು ಅಕಾಡೆಮಿ ಸನ್ನದ್ಧವಾಗಿದೆ. ಆದ್ದರಿಂದ ಯಾವುದೇ ಪದವಿ ಪಡೆದಿದ್ದರೂ ಉನ್ನತ ಹುದ್ದೆಯನ್ನು ಪಡೆಯುವ ಗುರಿ ಇಟ್ಟುಕೊಂಡು ಕಠಿಣ ತಪಸ್ಸಿನಂತೆ ಅಧ್ಯಯನ ನಡೆಸಬಲ್ಲ ಯುವಕ ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಕಾಂಕ್ಷಿಗಳು ತಮ್ಮ ಸ್ವಂತದ ವಿವರಗಳನ್ನು ಅಕಾಡೆಮಿಗೆ ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು. ಐಎಎಸ್ ಮತ್ತಿತರ ಅಖಿಲ ಭಾರತ ಸೇವೆಯ ಹುದ್ದೆಗಳಿಗೆ ಅವಶ್ಯಕವಿರುವಷ್ಟು ಕಾಲ ವಸತಿ, ಊಟ ಹಾಗೂ ಕೋಚಿಂಗ್ ಸೌಲಭ್ಯವನ್ನು ಅಕಾಡೆಮಿಯು ಉಚಿತವಾಗಿ ನೀಡಲಿದೆ.

ಕೆಎಎಸ್:

ಐಎಎಸ್ ಪರೀಕ್ಷೆಗೆ ಮಾತ್ರವಲ್ಲದೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಗುಂಪುಗಳಲ್ಲಿ ನೇಮಕ ಮಾಡಿಕೊಳ್ಳುವ ಗೆಜೆಟೆಡ್ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆಗೆ ನಡೆಸುವ ಕೆಎಎಸ್ ಪರೀಕ್ಷೆಯ ಪೂರ್ವಭಾವಿ ಅರ್ಹತಾ ಪರೀಕ್ಷೆ (ಪ್ರಿಲಿಮ್ಸ್) ಮತ್ತು ಮುಖ್ಯ ಪರೀಕ್ಷೆಗೆ ತರಬೇತಿ ನೀಡುತ್ತಿದೆ. ಯಾವುದೇ ಪದವಿ ಪಡೆದವರು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಎರಡು ಮೂರು ವರ್ಷಗಳ ಸತತ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆ ಮತ್ತು ವ್ಯಕ್ತಿತ್ವ ಸಂದರ್ಶನದಲ್ಲಿ ಪಡೆಯುವ ಅಂಕಗಳೇ ಆಯ್ಕೆಯಲ್ಲಿ ನಿರ್ಣಾಯಕವಾಗಿರುವುದರಿಂದ ಅರ್ಹತಾ ಪದವಿಯಲ್ಲಿ ಕಡಿಮೆ ಅಂಕಗಳನ್ನು ಪಡೆದವರೂ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಆಯ್ಕೆಯಾದ ನಿದರ್ಶನಗಳಿವೆ. ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ್ದಾಗಿರುವ ಈ ಹುದ್ದೆಗಳನ್ನು ಹಿಂದುಳಿದ ವರ್ಗಗಳ ಯುವಕ, ಯುವತಿಯರು ಪಡೆದುಕೊಳ್ಳಬೇಕು ಎಂಬುದು ನಮ್ಮ ಅಕಾಡೆಮಿಯ ಉದ್ದೇಶವಾಗಿದೆ.

ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ ತರಬೇತಿ:

ಕರ್ನಾಟಕ ಸರ್ಕಾರ ಕಾಲಕಾಲಕ್ಕೆ ಕರೆಯುವ ಸಬ್ ಇನ್ಸ್‍ಪೆಕ್ಟರ್ ಹುದ್ದೆಗಳಿಗೆ ಲಿಖಿತ ಪರೀಕ್ಷೆಗಳಿಗೆ ತರಬೇತಿ ಕೊಡಿಸಲಾಗುತ್ತದೆ. 168 ಸೆಂ.ಮೀ ಎತ್ತರ, 86 ಸೆಂ.ಮೀ ಎದೆಯ ಸುತ್ತಳತೆ ಇರುವ ಪುರುಷರು ಮತ್ತು 157 ಸೆಂಮೀ ಎತ್ತರ ಹಾಗೂ 45 ಕಿಲೋಗ್ರಾಂ ತೂಕ ಇರುವ ಯುವತಿಯರು ಈ ಹುದ್ದೆಗಳಿಗೆ ಆಯ್ಕೆಯಾಗಲು ಅರ್ಹರಿರುತ್ತಾರೆ. ದೈಹಿಕ ಪರೀಕ್ಷೆಯೂ ಆಯ್ಕೆ ಪರೀಕ್ಷೆಯಲ್ಲಿ ಇರುವುದರಿಂದ ಸೋಲೂರಿನಲ್ಲಿ ಇದಕ್ಕೂ ತರಬೇತಿಗೆ ವ್ಯವಸ್ಥೆ ಕಲ್ಪಿಸಲಾಗುವುದು.

ಬ್ಯಾಂಕಿಂಗ್ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ:

ಸೋಲೂರಿನಲ್ಲಿ 24 ಗಂಟೆಗಳ ಕಂಪ್ಯೂಟರ್ ಲ್ಯಾಬ್ ಅನ್ನು ಸಜ್ಜುಗೊಳಿಸಲಾಗಿದೆ. ಇಂಟರ್ ನೆಟ್ ಮೂಲಕ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಆನ್ ಲೈನ್ ತರಬೇತಿ ನೀಡಲಾಗುತ್ತದೆ. 20-30 ವಯೋಮಿತಿಯ ಯಾವುದೇ ಪದವಿ ಪಡೆದಿರುವ ಆಸಕ್ತರು ಈ ತರಬೇತಿಯನ್ನು ಪಡೆದುಕೊಳ್ಳಬಹುದು. ಬ್ಯಾಂಕಿಂಗ್ ಪರೀಕ್ಷೆ ಇರುವ ಮಾದರಿಯಲ್ಲಿಯೇ ತರಬೇತಿಯೂ ಇರುವುದರಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇಲ್ಲಿ ಪಡೆಯುವ ತರಬೇತಿ ಉಪಯೋಗಕ್ಕೆ ಬರುತ್ತದೆ.

ವೃತ್ತಿ ನೈಪುಣ್ಯತೆ ಹೆಚ್ಚಿಸುವ ತರಬೇತಿ:

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ನೌಕರಿ ಪಡೆಯುವುದಕ್ಕೆ ಅವಶ್ಯಕವಾದ ಇಂಗ್ಲಿಷ್ ಸಂವಹನ ಸಾಮಥ್ರ್ಯ ಹೆಚ್ಚಳ, ಪತ್ರವ್ಯವಹಾರ ಕ್ಷಮತೆ, ಸವಾಲುಗಳನ್ನು ಎದುರಿಸುವ ಧೈರ್ಯ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಹಲವು ಬಗೆಯ ತರಬೇತಿಗಳನ್ನು ಅಕಾಡೆಮಿ ನೀಡಲಿದೆ. ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ವರೆಗೆ ಓದಿರುವ ಯುವಜನರಿಗೆ ಉದ್ಯೋಗದ ಅರ್ಹತೆ ಹೆಚ್ಚಿಸಿಕೊಳ್ಳಲು ಅಲ್ಪಾವಧಿಯ ತರಬೇತಿಯನ್ನು ಕೊಡಿಸಲಾಗುತ್ತದೆ. ಇದರಲ್ಲಿ ವ್ಯವಹಾರ ಜ್ಞಾನ, ಸಂವಹನ ಸಾಮಥ್ರ್ಯ, ಕಚೇರಿ ನಿರ್ವಹಣೆಯ ತರಬೇತಿಯನ್ನು ನುರಿತ ತಜ್ಞರಿಂದ ಕೊಡಿಸಲಾಗುತ್ತದೆ. ಸೋಲೂರಿನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿದ್ಯಾರ್ಥಿನಿಲಯಗಳಿವೆ. ತರಬೇತಿಗೆ ಆಯ್ಕೆಯಾದವರಿಗೆ ಅಕಾಡೆಮಿಯು ಊಟ ಮತ್ತು ವಸತಿಯನ್ನು ಉಚಿತವಾಗಿ ನೀಡಲಿದೆ.

ಈಡಿಗರು ಸೇರಿದಂತೆ ಹಿಂದುಳಿದ ವರ್ಗಗಳ ಯುವಕ ಯುವತಿಯರು ಈ ಸೌಲಭ್ಯಗಳನ್ನು ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬುದು ಅಕಾಡೆಮಿಯ ಪೋಷಕರಾದ ಶ್ರೀ ಜಾಲಪ್ಪನವರ ಆಶಯವಾಗಿದೆ. ಆದ್ದರಿಂದ ಈಗ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುತ್ತಿರುವವರು, ಪದವಿ ಪಡೆದು ಉದ್ಯೋಗ ಪಡೆಯಲು ಪ್ರಯತ್ನ ನಡೆಸುತ್ತಿರುವವರು ತಮ್ಮ ಸಂಪರ್ಕ ದೂರವಾಣಿ ಸಂಖ್ಯೆಯೊಂದಿಗೆ ಸ್ವಂತ ವಿವರಗಳನ್ನು ಅಕಾಡೆಮಿಯ ಕಚೇರಿಗೆ ಕಳುಹಿಸಿ ನೊಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಅಭ್ಯರ್ಥಿಗಳು ಹೆಸರು, ವಿಳಾಸ, ವಿದ್ಯಾರ್ಹತೆ, ಜಾತಿ ಪ್ರಮಾಣ ಪತ್ರ, ಇ ಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಭಾವಚಿತ್ರ ಸಹಿತ ಅರ್ಜಿಗಳನ್ನು ಸಲ್ಲಿಸಿ ಹೆಸರು ನೊಂದಾಯಿಸಿಕೊಳ್ಳಬೇಕು.

ಅಕಾಡೆಮಿಯ ಹಿನ್ನೆಲೆ

ಆರ್.ಎಲ್.ಜಾಲಪ್ಪ ಅಕಾಡೆಮಿ’ ಅಸ್ತಿತ್ವಕ್ಕೆ ಬಂದಾಗ ಅದರಲ್ಲಿ ಟ್ರಸ್ಟಿಗಳಾಗಿ ಬೆಂಗಳೂರಿನ ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ ನಾರಾಯಣಸ್ವಾಮಿ, ಚಿಕ್ಕಬಳ್ಳಾಪುರದ ಜಿ.ಎಚ್.ನಾಗರಾಜು, ಆರ್.ಎಲ್.ಜಾಲಪ್ಪ ಅವರ ಮೊಮ್ಮಗ ರಾಕೇಶ್, ಲಕ್ಷ್ಮೀನರಸಯ್ಯ , ಎಚ್.ಎಲ್.ಶಿವಾನಂದ, ಲಕ್ಷ್ಮಣ ಕೊಡಸೆ, ಟಿ.ನರಸಿಂಹಸ್ವಾಮಿ ಮತ್ತು ಶಿವರಾಜು ಅವರು ನೇಮಕಗೊಂಡರು. ಒಂದು ವರ್ಷದ ನಂತರ ಎಂ.ತಿಮ್ಮೇಗೌಡ, ಎನ್. ಉದಯ್ ಅವರನ್ನು ಟ್ರಸ್ಟ್ಟಿಯಾಗಿ ಸೇರ್ಪಡೆ ಮಾಡಲಾಯಿತು. ಕೋವಿಡ್-೧೯ ಸಂದರ್ಭದಲ್ಲಿ ಎನ್ ಉದಯ್ ಅವರು ತೀರಿಹೋದ ನಂತರ ಅವರಿಂದ ತೆರವಾದ ಸ್ಥಾನಕ್ಕೆ ವಾಣಿಜ್ಯ ತೆರಿಗೆ ಇಲಾಖೆ ಆಧಿಕಾರಿ ಸುಮನಾ ಅವರನ್ನು ನೇಮಕ ಮಾಡಲಾಯಿತು. ಸತತವಾಗಿ ಗೈರು ಹಾಜರಾಗುತ್ತಿದ್ದ ಶಿವರಾಜು ಅವರನ್ನು ಅಕಾಡೆಮಿಯ ಸದಸ್ಯತ್ವದಿಂದ ಕೈಬಿಡಲಾಯಿತು. ಆರ್.ಎಲ್.ಜಾಲಪ್ಪ ಮತ್ತು ಜೆ.ಪಿ.ನಾರಾಯಣಸ್ವಾಮಿ ಅವರ ಆಸಕ್ತಿಯಿಂದ ಅಕಾಡಮಿಯ 2015 ಜೂನ್ 15 ರಂದು ಸೋಲೂರಿನಲ್ಲಿ ನಾಡಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಉದ್ಘಾಟನೆಯಾಯಿತು. ಜಾಲಪ್ಪ ಅಕಾಡೆಮಿ ತನ್ನ ಮೊದಲ ವರ್ಷದಲ್ಲಿ ಐಎಎಸ್, ಕೆಎಎಸ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಸೇರಿದಂತೆ ಕರ್ನಾಟಕ ಲೋಕಸೇವಾ ಆಯೋಗವು ನಡೆಸಿದ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಮಾರು 2200 ಕ್ಕೂ ಹೆಚ್ಚು ಗ್ರಾಮಿಣ ಯುವಕ ಯುವತಿಯರಿಗೆ ತರಬೇತಿ ನೀಡಿತ್ತು. ಬ್ಯಾಂಕಿಗ್ ಪರೀಕ್ಷೆ ತೆಗೆದುಕೊಳ್ಳ್ಳುವ ನೂರಾರು ಪದವೀಧರರು ಆನ್ ಲೈನ್ ತರಬೇತಿ ಪಡೆದಿದ್ದರು. ಈ ಅಭ್ಯರ್ಥಿಗಳಲ್ಲಿ ಮೊದಲ ವರ್ಷದಲ್ಲಿ ಎಂಬತ್ತಕ್ಕೂ ಹೆಚ್ಚಿನ ಸಂಖ್ಯೆಯ ಯುವಕ ಯುವತಿಯರು ಸಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದರು. ಒಬ್ಬ ಅಭ್ಯರ್ಥಿ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆಗೆ ಕೊಂಡಿನೇಮಕವಾದರು.

ಅಕಾಡೆಮಿಯಲ್ಲಿ ಯಾವುದೇ ಕಾಲದಲ್ಲಿ ಕನಿಷ್ಠ ಒಂದು ನೂರರಿಂದ ನೂರಿಪ್ಪತ್ತು ಅಭ್ಯರ್ಥಿಗಳು ತರಬೇತಿ ಪಡೆಯುತ್ತಿರುವಂತೆ ಕೋರ್ಸುಗಳನ್ನು ರೂಪಿಸಲಾಗುತ್ತಿದೆ. ಎರಡೂ ವಿದ್ಯಾರ್ಥಿನಿಲಯಗಳಿಗೆ ಪ್ರತ್ಯೇಕ ವಾರ್ಡನ್ಗಳು, ಅಡುಗೆ ಸಿಬ್ಬಂದಿ, ಕಚೇರಿ ಸಿಬ್ಬಂದಿ, ಗ್ರಂಥಾಲಯ ನಿರ್ವಹಣೆ ಮತ್ತಿತರ ಕೆಲಸಗಳನ್ನು ನೋಡಿಕೊಳ್ಳಲು ಆಡಳಿತಾಧಿಕಾರಿಯೊಬ್ಬರನ್ನು ನೇಮಕ ಮಾಡಲಾಗಿದೆ. ಅಕಾಡೆಮಿ ಆರಂಭವಾದ ೯ನೇ ವರ್ಷದಲ್ಲಿ ಸುಮಾರು 2282 ಮಂದಿ ಗ್ರಾಮಿಣ ಪದವೀಧರ ಯುವಕ-ಯುವತಿಯರು ವಿವಿಧ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆದಿದ್ದಾರೆ. ಇವರಲ್ಲಿ ೫೨೯ಕ್ಕೊ ಹೆಚ್ಚು ಮಂದಿ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದುಕೊಂಡಿದ್ದಾರೆ.

audit report 2017 -18

registration certificates