Founder's Message

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ

ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘವು ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಸೋಲೂರಿನಲ್ಲಿ ಅಭಿವೃದ್ಧಿಪಡಿಸುತ್ತಿರುವ ಆರ್ಯ ಈಡಿಗ ಮಹಾಸಂಸ್ಥಾನವು ಶೈಕ್ಷಣಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅಲ್ಲಿನ ಬ್ರಹ್ಮಶ್ರೀ ನಾರಾಯಣಗುರು ವಿದ್ಯಾಸಂಸ್ಥೆಯಲ್ಲಿ ಆರ್.ಎಲ್.ಜಾಲಪ್ಪ ಅಕಾಡೆಮಿಯು ಹಿಂದುಳಿದ ವರ್ಗಗಳ ಯುವಕ ಯುವತಿಯರಿಗೆ ವೃತ್ತಿ ನೈಪುಣ್ಯ ಹೆಚ್ಚಿಸುವ ಅನೇಕ ತರಬೇತಿಗಳನ್ನು ನೀಡುತ್ತಿದೆ. ಐಎಎಸ್, ಐಪಿಎಸ್, ಐಎಫ್‍ಎಸ್, ಐಆರ್‍ಎಸ್ ಇತ್ಯಾದಿ ಅಖಿಲ ಭಾರತ ನಾಗರಿಕ ಸೇವೆಯ ಅಧಿಕಾರಿಗಳನ್ನು ಕೇಂದ್ರ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಪ್ರತಿವರ್ಷ ಆಯ್ಕೆ ಮಾಡಿಕೊಳ್ಳುತ್ತಿದೆ. ಯಾವುದೇ ಪದವಿ ಪಡೆದವರು ಈ ಪರೀಕ್ಷೆ ತೆಗೆದುಕೊಳ್ಳಬಹುದು. ಎರಡು ಮೂರು ವರ್ಷಗಳ ಸತತ ಪರಿಶ್ರಮದಿಂದ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆದವರಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆಯುವ ಅಂಕಗಳೇ ಆಯ್ಕೆಯಲ್ಲಿ ನಿರ್ಣಾಯಕವಾಗಿರುವುದರಿಂದ ಅರ್ಹತಾ ಪದವಿಯಲ್ಲಿ ಕಡಿಮೆ ಅಂಕಗಳನ್ನು ಪಡೆದವರೂ ಈ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿ ಆಯ್ಕೆಯಾದ ನಿದರ್ಶನಗಳಿವೆ. ಆಡಳಿತ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ್ದಾಗಿರುವ ಈ ಹುದ್ದೆಗಳನ್ನು ಹಿಂದುಳಿದ ವರ್ಗಗಳ ಯುವಕ, ಯುವತಿಯರು ಪಡೆದುಕೊಳ್ಳಬೇಕು ಎಂಬುದು ನಮ್ಮ ಅಕಾಡೆಮಿಯ ಉದ್ದೇಶವಾಗಿದೆ.

ಅಕಾಡೆಮಿಯು ಈ ಹುದ್ದೆಗಳಿಗೆ ಆಗಸ್ಟ್ ತಿಂಗಳಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆಗೆ (ಪ್ರಿಲಿಮ್ಸ್) ಮತ್ತು ಅದರಲ್ಲಿ ಯಶಸ್ಸು ಪಡೆದವರಿಗೆ ಮುಖ್ಯ ಪರೀಕ್ಷೆ ಎದುರಿಸಲು ತರಬೇತಿ ನೀಡುತ್ತದೆ. ಸತತ ಪರಿಶ್ರಮ ಅವಶ್ಯಕವಾಗಿರುವ ಈ ಪರೀಕ್ಷೆಗಳಿಗೆ ಅನುಭವಿ ಉಪನ್ಯಾಸಕರಿಂದ ವಿಶೇಷ ಕೋಚಿಂಗ್ ಒದಗಿಸಲು ಅಕಾಡೆಮಿ ಸನ್ನದ್ಧವಾಗಿದೆ. ಆದ್ದರಿಂದ ಯಾವುದೇ ಪದವಿ ಪಡೆದಿದ್ದರೂ ಉನ್ನತ ಹುದ್ದೆಯನ್ನು ಪಡೆಯುವ ಗುರಿ ಇಟ್ಟುಕೊಂಡು ಕಠಿಣ ತಪಸ್ಸಿನಂತೆ ಅಧ್ಯಯನ ನಡೆಸಬಲ್ಲ ಯುವಕ ಯುವತಿಯರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಕಾಂಕ್ಷಿಗಳು ತಮ್ಮ ಸ್ವಂತದ ವಿವರಗಳನ್ನು ಅಕಾಡೆಮಿಗೆ ಸಲ್ಲಿಸಿ ನೊಂದಾಯಿಸಿಕೊಳ್ಳಬೇಕು. ಐಎಎಸ್ ಮತ್ತಿತರ ಅಖಿಲ ಭಾರತ ಸೇವೆಯ ಹುದ್ದೆಗಳಿಗೆ ಅವಶ್ಯಕವಿರುವಷ್ಟು ಕಾಲ ವಸತಿ, ಊಟ ಹಾಗೂ ಕೋಚಿಂಗ್ ಸೌಲಭ್ಯವನ್ನು ಅಕಾಡೆಮಿಯು ಉಚಿತವಾಗಿ ನೀಡಲಿದೆ.